ರಾಯಚೂರು ತಾಲೂಕಿನ ತುಂಗಭದ್ರ ಎಡದಂಡೆಯ ಕೆಳಭಾಗದಲ್ಲಿರುವ ಡಿಸ್ಟ್ರಿಬ್ಯೂಟರ್ ನಂ.98 ಉಪಕಾಲುವೆಗೆ ಸಮರ್ಪಕವಾದ ಗೇಜ್ ನಿರ್ವಹಣೆ ಮಾಡಲು ಆಗ್ರಹಿಸಿ ಕೆಳಭಾಗದ ರೈತರು ಶುಕ್ರವಾರ ಕಾಲುವೆ ಹತ್ತಿರ ಪ್ರತಿಭಟನೆ ನಡೆಸಿದ್ದಾರೆ.
ಬಂಗಾರಪ್ಪನ ಕೆರೆಯಿಂದ ನೀರು ಹರಿಸಲಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಗೇಜ್ ಕಡಿಮೆಯಾಗಿದೆ. ಸಮರ್ಪಕವಾಗಿ ಗೇಜ್ ನಿರ್ವಹಣೆ ಮಾಡುತ್ತಿಲ್ಲ. ಒಂದು ಅಡಿ ನೀರಷ್ಟೆ ಹರಿದ ಬರುತ್ತಿದೆ. ಇದರಿಂದ ಕೆಳಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ಸಾತ್ ಮೈಲ್, ಕಸ್ಬೆ ಕ್ಯಾಂಪ್, ನೆಲಹಾಳ, ದಿನ್ನಿ, ಗಾರಲದಿನ್ನಿ, ಮರ್ಚಟಹಾಳ ಗ್ರಾಮಗಳ ರೈತರು ಸಾತ್ ಮೈಲ್ ಕ್ರಾಸ್ ನಲ್ಲಿರುವ ಉಪಕಾಲುವೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನೀರು ಬಾರದ ಹಿನ್ನೆಲೆಯಲ್ಲಿ ಹತ್ತಿ, ಮೆಣಸಿನಕಾಯಿ ಬೆಳೆಗಳು ಒಣಗುತ್ತಿವೆ. ಹೀಗಾಗಿ ಸಮರ್ಪಕ ಗೇಜ್ ನಿರ್ವಹಣೆ ಮಾಡುವ ಮೂಲಕ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಜಿಲ್ಲಾಡಳಿತ ಅನುಕೂಲ ಮಾಡಿಕೊಡಬೇಕು. ಬಂಗಾರಪ್ಪನ ಕೆರೆಯಿಂದ ಎಡದಂಡೆ ನಾಲೆ ಮುಖಾಂತರ ಹರಿಸುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಿಸಿದಾಗ ಮಾತ್ರ ಕೆಳಭಾಗಕ್ಕೆ ನೀರಿ ತಲುಪಲು ಸಾಧ್ಯ ಎಂದು ರೈತರು ಒತ್ತಾಯಿಸಿದ್ದಾರೆ. ಅಧಿಕಾರಿಗಳು, ಶಾಸಕರು ಎಚ್ಚೆತ್ತುಕೊಂಡು ನೀರು ಹರಿಸಲು ಕ್ರಮವಹಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.